ಎಡ್ವಡ್ರ್ಸ್, ಜೊನಾಥನ್
	1703-1758. ಅಮೆರಿಕದ ಪ್ರಸಿದ್ಧ ಸಂತ, ತತ್ತ್ವe್ಞÁನಿ, ಕ್ಯಾಲ್ವಿನ್ನನ ಪಂಥದ ಪುನರುಜ್ಜೀವಕ ಮತ್ತು ಕ್ರೈಸ್ತಮತ ಮೀಮಾಂಸಕ. ಇಂಗ್ಲೆಂಡಿನಿಂದ ಅಮೆರಿಕಕ್ಕೆ ವಲಸೆ ಹೋದ ಕುಟುಂಬ ಒಂದರಲ್ಲಿ 1703ನೆಯ ಅಕ್ಟೋಬರ್ 6ನೆಯ ತಾರೀಖು ಪೂರ್ವ ವಿಂಡರ್ಸ್‍ನಲ್ಲಿ ಜನಿಸಿದ. ತಂದೆ ಟಿಮೋಥಿ. ವಿಂಡರ್ಸಿನ ಚರ್ಚಿನ ಧರ್ಮಾಧಿಕಾರಿ (ಪಾಸ್ಟರ್). ಹದಿಮೂರನೆಯ ವಯಸ್ಸಿನವರೆಗೆ ಎಡ್ವರ್ಡನ ವಿದ್ಯಾಭ್ಯಾಸ ಮನೆಯಲ್ಲೇ ನಡೆಯಿತು. ಅಷ್ಟು ಸಣ್ಣ ವಯಸ್ಸಿನಲ್ಲೇ ಅವನು ಲ್ಯಾಟಿನ್, ಗ್ರೀಕ್ ಮತ್ತು ಹೀಬ್ರೂ ಭಾಷೆಗಳ ಪರಿಚಯ ಮಾಡಿಕೊಂಡಿದ್ದ. ಹದಿಮೂರನೆಯ ವಯಸ್ಸಿನಲ್ಲಿಯೇ ಕಾಲೇಜನ್ನು ಸೇರಿದ. ಕಾಲೇಜಿಗೆ ಸೇರಿದ ಎರಡನೆಯ ವರ್ಷ ಅವನಿಗೆ ಲಾಕ್‍ನ ಎಸ್ಸೆ ಕನ್ಸರ್ನಿಂಗ್ ಹ್ಯೂಮನ್ ಅಂಡ್ರ್‍ಸ್ಟ್ಯಾಂಡಿಂಗ್ ಎಂಬ ಗ್ರಂಥ ಲಭಿಸಿತು. ಅದು ತನಗೆ ಲಭಿಸಿದ್ದು ಜಿಪುಣನಿಗೆ ಸುವರ್ಣನಿಧಿ ಸಿಕ್ಕಿದಷ್ಟು ಸಂತೋಷವಾಯಿತೆಂದು ತಾನೇ ಹೇಳಿಕೊಂಡಿದ್ದಾನೆ. ಅದೇ ಕಾಲದಲ್ಲಿ ನ್ಯೂಟನ್ನನ ಪ್ರಿನ್ಸಿಪಿಯ ಗ್ರಂಥವನ್ನೂ ಓದಿದ. 1720ರಲ್ಲಿ ಬಿ.ಎ. ಪದವಿಯನ್ನೂ 1723ರಲ್ಲಿ ಎಂ.ಎ. ಪದವಿಯನ್ನೂ ಗಳಿಸಿದ. 1727ರಲ್ಲಿ ನಾರ್ಥಾಮ್ಟನ್ ಚರ್ಚಿನಲ್ಲಿ ತನ್ನ ತಾತನ ಸಹೋದ್ಯೋಗಿಯಾದ. ಅದೇ ವರ್ಷ ಸಾರಾ ಪೀರ್‍ಪಾಂಟ್ ಎಂಬಾಕೆಯನ್ನು ಮದುವೆಯಾದ.

	ಎಡ್ವಡ್ರ್ಸ್ ಬಾಲ್ಯದಿಂದ ಪ್ರಕೃತಿಯ ವೈಚಿತ್ರ್ಯವನ್ನು ಅವಲೋಕಿಸುವುದರಲ್ಲೂ ಇರವಿನ ವಿಚಾರಚಿಂತನದಲ್ಲೂ ಮಗ್ನನಾಗಿದ್ದ. ಹತ್ತು ವರ್ಷದ ಹುಡುಗನಾಗಿದ್ದಾಗಲೇ ಆತ್ಮದ ವಿಚಾರವಾಗಿ ಒಂದು ಪ್ರಬಂಧವನ್ನು ಬರೆದಿದ್ದ. ಕಾಲೇಜಿಗೆ ಸೇರುವುದಕ್ಕೆ ಮುಂಚೆ ಹಾರುವ ಜೇಡರಹುಳುವನ್ನು ಕುರಿತು ಒಂದು ಪ್ರಬಂಧವನ್ನು ಬರೆದಿದ್ದ. ಸುಮಾರು ಅದೇ ಕಾಲದಲ್ಲೆ ಕಾಮನಬಿಲ್ಲನ್ನು ಕುರಿತು ಇನ್ನೊಂದು ಲೇಖನವನ್ನೂ ಬರೆದಿದ್ದ. ಈ ಎರಡು ಲೇಖನಗಳೂ ಅವನ ತೀಕ್ಷ್ಣ ಅವಲೋಕನಶಕ್ತಿಗೆ ನಿದರ್ಶನಗಳು. ಹದಿನಾರನೆಯ ವಯಸ್ಸಿನಲ್ಲಿ ಇರವು(ಬೀಯಿಂಗ್) ಎಂಬ ತಾತ್ತ್ವಿಕ ಲೇಖನವನ್ನು ಬರೆದಿದ್ದ. ಕೇವಲ ಅಭಾವ ಅಚಿಂತ್ಯ, ಯಾವುದನ್ನೇ ಆಗಲಿ ಇದೆ ಎಂದು ಹೇಳಬೇಕಾದರೆ ಅದು ಇಂದ್ರಿಯಾನುಭವದ ಗುಣಗಳಿಂದ ಅಥವಾ ಆಲೋಚನೆಯ ಭಾವನೆಗಳಿಂದ ಕೂಡಿರಬೇಕು. ಆದ್ದರಿಂದ ಮಾನಸಿಕ ಭಾವನೆಗಳನ್ನಾಗಲಿ ಇಂದ್ರಿಯಗಳ ಬಿಂಬಗಳನ್ನಾಗಲಿ ಬಿಟ್ಟು ಯಾವುದನ್ನೂ ಇರುವುದೆಂದು ಹೇಳಲಾಗುವುದಿಲ್ಲ. ಇರವು ಅರಿವಿಗೆ ಅಧೀನ. ವಿಶ್ವ ಚೇತನಮಯ, ಎಲ್ಲಕ್ಕೂ ಮೂಲವಾದದ್ದು ಈಶ್ವರಚೇತನ, ಸರ್ವವೂ ಈಶ್ವರಾಧೀನ. ಎಲ್ಲವೂ ಇರುವುದು ಅವನ ಅನುಗ್ರಹದಿಂದ. ದೇವರ ಮುನಿಸೂ ಅನುಗ್ರಹವೇ. ಇವನ ಈ ವಾದ ಬಹುಮಟ್ಟಿಗೆ ಬಾಕ್ರ್ಲೆವಾದವನ್ನು ಹೋಲುತ್ತದೆಯಾದರೂ ಇದನ್ನು ಬಾಕ್ರ್ಲೆಯ ನೆರವಿಲ್ಲದೆ ಸ್ವತಂತ್ರವಾಗಿ ನಿರೂಪಿಸಿದ್ದ. ಈ ಭಾವನಾವಾದ ಮುಂದೆ ಮತಸಿದ್ಧಾಂತಕ್ಕೆ ತಳಹದಿಯಾಯಿತು.

	ಅಮೆರಿಕಕ್ಕೆ ವಲಸೆ ಬಂದು ನೆಲೆಸಿದ್ದವರು ವಿಶೇಷವಾಗಿ ಕ್ಯಾಲ್ವಿನ್ನನ ಪಂಥದ ನಿರ್ಮಲರು. ಮೂಲ ವಲಸೆಗಾರರು ಕ್ಯಾಲ್ವಿನ್ನಿನ ನಿಯಮಗಳನ್ನು ತುಂಬ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಆದರೆ ಅವನ ನಾಲ್ಕನೆಯ ಸಂತತಿಯವರಲ್ಲಿ ನಿರ್ಮಲರ ನೀತಿ ಇಳಿಮುಖವಾಗಿತ್ತು; ಆಸ್ತಿಕತೆಯಲ್ಲದೆ ಸಾಮಾನ್ಯ ನೀತಿ ಕೂಡ ಸಡಿಲವಾಗಿತ್ತು. ಕ್ಯಾಲ್ವಿನ್‍ತತ್ತ್ವ ಮಸಕಾಗಿ ಆರ್ಮೀನಿಯ ತತ್ತ್ವ ತಲೆ ಎತ್ತಿತ್ತು. ಚರ್ಚುಗಳಲ್ಲಿ ಪ್ರಭುಭೋಜನಕ್ಕೆ ಆಧ್ಯಾತ್ಮಿಕ ಪರಿವರ್ತನೆ ಹೊಂದದವರನ್ನೂ ಸೇರಿಸುತ್ತಿದ್ದರು. ಮೊದಮೊದಲಲ್ಲಿ ಎಡ್ವಡ್ರ್ಸ್ ಈ ಪದ್ಧತಿಗೆ ಒಪ್ಪಿಗೆ ಇತ್ತಿದ್ದ. ಆದರೆ ಸ್ವಲ್ಪಕಾಲದಲ್ಲೇ ಅದು ಸರಿಯಲ್ಲವೆಂದು ಮನದಟ್ಟಾಯಿತು. ನಿರ್ಮಲ ಪಂಥದ ತತ್ತ್ವವನ್ನು ಪುನರುಜ್ಜೀವನಗೊಳಿಸಲು ಈತ ಇಪ್ಪತ್ಮೂರು ವರ್ಷಗಳ ಕಾಲ ಶ್ರಮಿಸಿದ. ಈ ಕಾಲದಲ್ಲಿ ಈತ ಮಾಡಿದ ಧರ್ಮಪ್ರವಚನಗಳು (ಸರ್ಮನ್) ಅಮೆರಿಕದ ಚರ್ಚಿನ ಚರಿತ್ರೆಯಲ್ಲಿ ಪ್ರಸಿದ್ಧವಾದವು. ಅವುಗಳಿಗೆ ಆಧಾರ ಪುಸ್ತಕಗಳಿಲ್ಲ. ಸ್ವಂತ ಅನುಭವ-ನೇರವಾಗಿ ದೇವರಿಂದ ದೊರೆತ ಪ್ರೇರಣೆ. ಈತನ ಧರ್ಮಪ್ರವಚನಗಳು ಜನರಲ್ಲಿ ಭಕ್ತಿ ಉಕ್ಕಿ ಹರಿಯುವಂತೆ ಮಾಡಿದುವು. 1747ರಲ್ಲಿ ನಾರ್ಥಾಮ್ಟನ್ನಿನ ಆರಾಧನೆಯ ಗೋಷ್ಠಿಯ ಸಂಖ್ಯೆ ಆರುನೂರ ಇಪ್ಪತ್ತಕ್ಕೆ ಏರಿತು. ಆದರೆ ಈ ಗೋಷ್ಠಿಯವರಲ್ಲಿ ನಿಜವಾದ ಆತ್ಮಪರಿವರ್ತನೆ ಇಲ್ಲದ ಅನೇಕರು ಇದ್ದರು. ಇಂಥವರು ಪ್ರಭುಭೋಜನದಲ್ಲಿ ಭಾಗವಹಿಸುತ್ತಿದ್ದರು. ನಿಜವಾದ ಆತ್ಮಪರಿವರ್ತನೆ ಹೊಂದದವರು ಪ್ರಭುಭೋಜನದಲ್ಲಿ ಭಾಗವಹಿಸಲು ಅರ್ಹರಲ್ಲ. ಅವರಿಗೆ ಭಾಗವಹಿಸಲು ಅವಕಾಶವಿರಕೂಡದೆಂದು ಎಡ್ವಡ್ರ್ಸ್ ಪಟ್ಟುಹಿಡಿದು ವಾದಿಸಿದ. ಇದು ಆರಾಧನೆಯ ಗೋಷ್ಠಿಯವರಿಗೆ ಹಿಡಿಸಲಿಲ್ಲ. ಈ ವಿಚಾರದಲ್ಲಿ ಎರಡು ವರ್ಷ ಕಾಲ ವಿವಾದ ನಡೆದು ಬಹುಮತ ಎಡ್ವಡ್ರ್ಸ್‍ಗೆ ವಿರೋಧವಾಯಿತು. 1750ನೆಯ ಜೂನ್ ಇಪ್ಪತ್ತನೆಯ ದಿನ ಗೋಷ್ಠಿಯವರು ಎಡ್ವಡ್ರ್ಸ್‍ನನ್ನು ಧರ್ಮಾಧಿಕಾರಿ ಪೀಠದಿಂದ ತೆಗೆದುಹಾಕಿದರು. ಹೀಗೆ ಸೋಲಾದರೂ ಇವನ ಅನಂತರ ಈ ಪಕ್ಷ ಊರ್ಜಿತವಾಯಿತು.

	ಕೆಲವು ತಿಂಗಳ ತರುವಾಯ ಎಡ್ವಡ್ರ್ಸ್ ನಾಡಿನಗಡಿ ಪ್ರದೇಶದ ಸ್ಟಾಕ್‍ಬ್ರಿಜ್ ಎಂಬ ಒಂದು ಕೊಪ್ಪಲಿನಲ್ಲಿ ವಾಸಿಸುತ್ತ ಅಲ್ಲಿನ ರೆಡ್ ಇಂಡಿಯನರಲ್ಲಿ ಕ್ರೈಸ್ತಮತ ಪ್ರಚಾರಮಾಡಿದ. ನಾರ್ಥಾಮ್ಟನ್‍ನಲ್ಲಿ ಧರ್ಮಾಧಿಕಾರಿಯಾಗಿದ್ದ ಕಾಲದಲ್ಲಿ ಈತ ಕ್ರೈಸ್ತಮತ ಮೀಮಾಂಸೆಯ ವಿಚಾರವಾಗಿ ಬರೆಯಲು ವಿರಾಮವಿರಲಿಲ್ಲ. ಆ ವಿರಾಮ ಈಗ ಅವನಿಗೆ ದೊರೆಯಿತು. ಫ್ರೀಡಂ ಆಫ್ ದಿ ವಿಲ್ (1754), ಒರಿಜಿನಲ್ ಸಿನ್ (1768), ದಿ ಎಂಡ್ ಫಾರ್ ಗಾಡ್ ಕ್ರಿಯೇಟೆಡ್ ದಿ ವಲ್ರ್ಡ್, ದಿ ನೇಚರ್ ಆಫ್ ಟ್ರೂ ವಚ್ರ್ಯು, ಹಿಸ್ಟರಿ ಆಫ್ ದಿ ವರ್ಕ್ ಆಫ್ ರಿಡೆಂಪ್ಷನ್ - ಮೊದಲಾದ ಗ್ರಂಥಗಳನ್ನೀತ ಬರೆದಿದ್ದಾನೆ. ಕೊನೆಯ ಮೂರು ಗ್ರಂಥಗಳು ಈತ ಗತಿಸಿದನಂತರ ಪ್ರಕಟವಾದುವು.

	1757ರಲ್ಲಿ ಎಡ್ವಡ್ರ್ಸ್ ಪ್ರಿನ್ಸ್‍ಟನ್ ಕಾಲೇಜಿನ ಅಧ್ಯಕ್ಷನಾಗಲು ಒಪ್ಪಿಕೊಂಡ. ಆದರೆ ಅಧ್ಯಕ್ಷತೆಯನ್ನು ವಹಿಸಿಕೊಂಡ ಕೆಲವೇ ತಿಂಗಳುಗಳಲ್ಲಿ ಅವನಿಗೆ ಸಿಡುಬು ರೋಗ ತಗಲಿ 1758ರ ಮಾರ್ಚ್ 22ರಂದು ದೈವಾಧೀನನಾದ. ಎಡ್ವಡ್ರ್ಸ್ ಅಮೆರಿಕದ ಮತಮೀಮಾಂಸೆಗೆ ಸುಭದ್ರವಾದ ತಳಹದಿಯನ್ನು ಹಾಕಿದ. ಹತ್ತೊಂಬತ್ತನೆಯ ಶತಮಾನದವರೆಗೆ ಅಮೆರಿಕದ ಮತಮೀಮಾಂಸೆಯ ಮೇಲೆ ಅವನ ಪ್ರಭಾವ ಜೀವಂತವಾಗಿತ್ತು. 								 
 (ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ